
ಪತ್ರಿಕಾ ಮಾಧ್ಯಮ ಸಮಾಜದ ಸಾಮರಸ್ಯ ಕಾಪಾಡಬೇಕು : ಡಾ.ಅಬ್ದುಲ್ ಹಕೀಂ
ಹೊಸನಗರ: ಸಮಾಜದ ಆಗುಹೋಗುಗಳಲ್ಲಿ ಪತ್ರಿಕಾ ಮಾಧ್ಯಮಗಳ ಪಾತ್ರ ಮುಖ್ಯವಾಗಿದ್ದು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಉಪನ್ಯಾಸಕ ಡಾ.ಅಬ್ದುಲ್ ಹಕೀಂ ಅಭಿಪ್ರಾಯಪಟ್ಟರು.
ಹೊಸನಗರ ತಾಲೂಕಿನ ನಗರ ಜುಮ್ಮಾ ಮಸೀದಿಯಲ್ಲಿ ಇತ್ತೀಚೆಗೆ ನಡೆದ ಈದ್ ಮಿಲಾದ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಿಕೆಗಳು ತನ್ನದೇ ರೀತಿಯಲ್ಲಿ ಶಿಕ್ಷಣ ನೀಡುತ್ತಾ ಜನರ ಜ್ಞಾನವನ್ನು ಹೆಚ್ಚಿಸುತ್ತಾ ಬಂದಿವೆ. ಆದರೆ ಇಂದು ಮಾಧ್ಯಮಗಳಲ್ಲಿ ಒಂದು ಸಣ್ಣ ಘಟನೆ ಅತ್ಯಂತ ವರ್ಣರಂಜಿತವಾಗುತ್ತಿದ್ದು ಸಮಾಜದ ಸ್ವಾಸ್ಥ್ಯ ಕಲುಶಿತವಾಗಲು ಪರೋಕ್ಷ ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸಮಾಜದಲ್ಲಿ ಯಾವುದೇ ಗಂಭೀರ ಸಮಸ್ಯೆ ಎದುರಾದರೂ ಸರ್ಕಾರಗಳನ್ನು ಎಚ್ಚರಿಸಿ ಅದಕ್ಕೆ ಪರಿಹಾರ ನೀಡುವ ತಾಕತ್ತು ಮಾಧ್ಯಮ ಪ್ರಪಂಚಕ್ಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜುಮ್ಮಾ ಮಸೀದಿ ಗುರುಗಳಾದ ಅಶ್ರಫ್ ಹಿಮಾಮಿ, ಮುಸ್ಲೀಂ ಸಮುದಾಯ ದೇಶದಲ್ಲಿ ಅತ್ಯಂತ ಹಿಂದುಳಿದಿದೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ಉನ್ನತ ಶಿಕ್ಷಣ ಪಡೆಯುವ ಸಂಖ್ಯೆ ಹೆಚ್ಚಾಗಬೇಕಿದೆ ಎಂದರು.
ಈ ವೇಳೆ ಡಾಕ್ಟರೇಟ್ ಪಡೆದ ಡಾ.ಅಬ್ದುಲ್ ಹಕೀಂ, ಶಿವಮೊಗ್ಗ ಜಿಲ್ಲಾ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ರವಿ ನಾಗರಕೊಡಿಗರಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಕ್ಕಳಿಂದ ವಿಶೇಷ ದಫ್ ಕಾರ್ಯಕ್ರಮ ಗಮನಸೆಳೆಯಿತು.
ನಗರ ಜಮಾತ್ ಅಧ್ಯಕ್ಷ ಹಿದಾಯತ್, ಹೊಸನಗರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರವಿಬಿದನೂರು, ಮದ್ರಸಾ ಅಧ್ಯಕ್ಷ ಅಲ್ಫಾಜ್, ದಫ್ ಉಸ್ತಾದ್ ಬಶೀರ್ ಉಸ್ತಾದ್ ಕಾಪು, ಅಜರ್ ಮಜೂರ್, ಪ್ರಮುಖರಾದ ಸಾಬಜನ್ ಸಾಬ್, ಅಬ್ಬಾಸ್ ಇತರರು ಇದ್ದರು.