70ರ ಹರೆಯದ ಮಹಿಳೆಯ ಹೊಟ್ಟೆಯಲ್ಲಿ ಬರೋಬ್ಬರಿ 4 ಕೆಜಿ ತೂಕದ ಗಡ್ಡೆ | ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಗಮನ ಸೆಳೆದ ತೀರ್ಥಹಳ್ಳಿ ಜಯ ಚಾಮರಾಜೇಂದ್ರ ಆಸ್ಪತ್ರೆ

ತೀರ್ಥಹಳ್ಳಿ: 70 ವರ್ಷದ ಹಿರಿಯ ಮಹಿಳೆಯ ಹೊಟ್ಟೆಯೊಳಗಿದ್ದ ಬರೋಬ್ಬರಿ 4 ಕೆಜಿ ತೂಕದ ಗಡ್ಡೆಯನ್ನು ಯಶಸ್ವಿ ಶಸ್ತ್ರ ಚಿಕಿತ್ಸೆ ಮೂಲಕ ಹೊರತೆಗೆಯುವ ಮೂಲಕ ತೀರ್ಥಹಳ್ಳಿ ವೈದ್ಯರು ಗಮನ ಸೆಳೆದಿದ್ದಾರೆ.

ಹೌದು ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರ ನಡುವೆ ತೀರ್ಥಹಳ್ಳಿ ಜಯಚಾಮರಾಜೇಂದ್ರ ಆಸ್ಪತ್ರೆ ಇಂತಹದ್ದೊಂದು ಯಶಸ್ವಿ ಶಸ್ತ್ರಚಿಕಿತ್ಸೆಗೆ ಸಾಕ್ಷಿಯಾಗುವ ಮೂಲಕ ತನ್ನ ಹಿರಿಮೆಯನ್ನು ಮತ್ತೊಮ್ಮೆ ಲೋಕಕ್ಕೆ ಸಾರಿದೆ.

 

ಆಸ್ಪತ್ರೆಗೆ ದಾಖಲಾದ 70 ರ ಹಿರಿಯ ಮಹಿಳೆ ಸಾಕಷ್ಟು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹಲವು ಪ್ರತಿಷ್ಠಿತ ಆಸ್ಪತ್ರೆಗಳನ್ನು ಸುತ್ತಾಡಿದರೂ ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಆ ಆಸ್ಪತ್ರೆಗಳಿಂದ ವಾಪಾಸಾದ ಬಳಿಕ ಬಂದಿದ್ದು ತೀರ್ಥಹಳ್ಳಿ ಆಸ್ಪತ್ರೆಗೆ.

ವೈದ್ಯರಾದ ಡಾ.ರಂಗಸ್ವಾಮಿ, ಡಾ.ಸುಮಾ, ಡಾ.ಗಣೇಶ ಭಟ್ ಸತತ ಪರಿಶ್ರಮ ಮತ್ತು ಕರ್ತವ್ಯಪರತೆಯೊಂದಿಗೆ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆ ಹೊಟ್ಟೆಯೊಳಗಿದ್ದ ಗಡ್ಡೆಯನ್ನು ಹೊರತೆಗೆದು ಮಹಿಳೆಗೆ ಮರುಜೀವ ನೀಡಿದ್ದಾರೆ.

ತೀರ್ಥಹಳ್ಳಿಯ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಹತ್ತುಹಲವು ಮಾದರಿ ಕಾರ್ಯಗಳು ನಡೆದಿವೆ. ಆ ಹಿರಿಮೆಯ ಸಾಲಿಗೆ ಈ ಶಸ್ತ್ರಚಿಕಿತ್ಸೆಯೂ ಸೇರಿದೆ. ಸಹಜವಾಗಿ ಆಸ್ಪತ್ರೆ ಮತ್ತು ವೈದ್ಯ ಸಮೂಹಕ್ಕೆ ಅಭಿನಂದನೆ ವ್ಯಕ್ತವಾಗಿವೆ.

ಯೋಚಿಸಿ ಶಸ್ತ್ರ ಚಿಕಿತ್ಸೆಯ ನಿರ್ಧಾರ:
ಮಹಿಳೆಗೆ 70 ವರ್ಷವಾಗಿತ್ತು. ಅಲ್ಲದೆ ಬೆನ್ನು ಹುರಿ ಸರ್ಜರಿ ಕೂಡ ಮಾಡಲಾಗಿತ್ತು. ವಾರದ ಹಿಂದೆ ಬಂದಾಗ ವೈದ್ಯರುಗಳು ಸೇರಿ ಯೋಚಿಸಿ ಗಟ್ಟಿ ನಿರ್ಧಾರಕ್ಕೆ ಬಂದು ಶಸ್ತ್ರ ಚಿಕಿತ್ಸೆಗೆ ನಿರ್ಧರಿಸಲಾಯಿತು. ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಗಡ್ಡೆಯನ್ನು ಹೊರತೆಗೆಯಲಾಗಿದೆ. ಮಹಿಳೆ ಆರೋಗ್ಯವಾಗಿದ್ದಾರೆ.
ಡಾ.ಗಣೇಶ ಭಟ್, ತೀರ್ಥಹಳ್ಳಿ

Exit mobile version