
ಹೊಸನಗರ: ಹಿರಿಯ ವ್ಯಕ್ತಿಗಳನ್ನು ಕಡೆಗಣಿಸದೇ ಅವರ ಅನುಭವ ಕಿರಿಯರಿಗೆ ಮಾದರಿಯಾಗಿ ಪಡೆದುಕೊಳ್ಳಬೇಕು ಎಂದು ಹೊಸನಗರದ ಹಿರಿಯ ವ್ಯವಹಾರ ನ್ಯಾಯಾಧೀಶರು, ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಸಂತೋಷ್ ಎಂ.ಎಸ್. ಅಭಿಪ್ರಾಯ ಪಟ್ಟರು
ತಾಪಂ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರ ಶಿವಮೊಗ್ಗ, ತಾಲೂಕು ಕಾನೂನು ಸೇವಾ ಸಮಿತಿ ಹೊಸನಗರ, ವಕೀಲರ ಸಂಘ ಹೊಸನಗರ ಸಂಯುಕ್ತವಾಗಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಯುವ ಸಮಾಜ ಹಿರಿಯರ ಬದುಕಿನ ಅನುಭವ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ ಯಾವುದೇ ಸವಾಲಿಗೂ ಎದೆಗುಂದಬೇಕಿಲ್ಲ. ಯುವ ನಾಗರಿಕರು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಜೊತೆಗೆ ಮನೆಯಲ್ಲಿರುವ ಹಿರಿಯರ ರಕ್ಷಣೆ ಮಾಡಬೇಕು. ಅವರ ಆಗುಹೋಗುಗಳ ಬಗ್ಗೆ ಗಮನ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.
ಪ್ರಧಾನ ವ್ಯವಹಾರ ನ್ಯಾಯಾಧೀಶರು, ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ರವಿಕುಮಾರ್ ಕೆ ಮಾತನಾಡಿ, ತಂದೆತಾಯಿಗಳು ತಮ್ಮ ಬದುಕನ್ನೇ ವ್ಯಯಿಸಿ ಮಕ್ಕಳಿಗಾಗಿ ಆಸ್ತಿ ಪಾಸ್ತಿ, ವಿದ್ಯೆಯನ್ನ ಧಾರೆ ಎರೆಯುತ್ತಾರೆ. ಆಸ್ತಿಗಾಗಿ ಮಕ್ಕಳ ನಡುವೆ ಗಲಾಟೆ ನಡೆದಾಗ ತಮಗೇನು ಇಟ್ಟುಕೊಳ್ಳದೇ ಸಮಾನವಾಗಿ ಹಂಚುತ್ತಾರೆ. ಇದರ ಉದ್ದೇಶ ಮಕ್ಕಳು ಚೆನ್ನಾಗಿರಬೇಕು, ಮನಸ್ಸುಗಳು ಒಡೆಯಬಾರದು ಎಂದು. ಆದರೆ ಮಕ್ಕಳು ಆಸ್ತಿ ಸಿಕ್ಕ ಮೇಲೆ ತಂದೆತಾಯಿಗೆ ಊಟ ಹಾಕಲ್ಲ.. ಅವರ ಚಟುವಟಿಕೆಯನ್ನು ಕೂಡ ಗಮನಿಸದೇ ತಮಗೇ ಸಂಬಂಧವೇ ಇಲ್ಲ ಎಂಬಂತೆ ಮಕ್ಕಳಲ್ಲಿ ವರ್ತನೆ ಕಂಡು ಬರುತ್ತದೆ. ಆದರೆ ಹಾಗಾಗದೇ ತಮ್ಮ ಮನೆ, ತಲೆಮಾರು, ಹಿರಿಯರನ್ನು ಕಾಪಿಡುವ ಮನೋಭಾವ ಮೇಳೈಸಬೇಕಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ವಕೀಲ ಕರ್ಣಕುಮಾರ್ ಎ.ಜೆ, ತಾಪಂ ಸಹಾಯಕ ನಿರ್ದೇಶಕ ರಾಜೇಂದ್ರಕುಮಾರ್, ತಾಪಂ ವ್ಯವಸ್ಥಾಪಕ ಶಿವಕುಮಾರ್ ಉಪಸ್ಥಿತರಿದ್ದರು.