ರಾಜ್ಯದಲ್ಲಿ 8 ಸಾವಿರ.. ಪ್ರತಿ ಶಾಸಕರ ವ್ಯಾಪ್ತಿಯಲ್ಲಿ 30 ಶಾಲಾ ಕೊಠಡಿ | ಗೃಹ ಸಚಿವ ಆರಗ ಜ್ಞಾನೇಂದ್ರ

ಹೊಸನಗರ.ಆ.08:ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 8 ಸಾವಿರ ನೂತನ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅನುದಾನ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಇದರ ಅಂಗವಾಗಿ ಪ್ರತಿ ಶಾಸಕರ ವ್ಯಾಪ್ತಿಯಲ್ಲಿ 30 ನೂತನ ಕೊಠಡಿಗಳ ನಿರ್ಮಾಣ ಆಗಲಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
ಇಲ್ಲಿನ ಗಾಯತ್ರಿ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ತ್ರೈ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಯಿಂದಾಗಿ ಹಲವು ಕಡೆಗಳಲ್ಲಿ ಶಾಲ ಕಟ್ಟಡಗಳಿಗೆ ಧಕ್ಕೆಯಾಗಿದೆ. ನೂತನ ಕೊಠಡಿಗಳ ನಿರ್ಮಾಣ ಕರ‍್ಯ ಆಗುವ ಮೊದಲು ಶಿಥಿಲಗೊಂಡಿರುವ ಕಟ್ಟಡಗಳ ದುರಸ್ತಿಗೆ ಅನುದಾನ ಬಿಡುಗಡೆಗೊಳಿಲಾಗುವುದು. ಈ ಹಿನ್ನೆಲೆಯಲ್ಲಿ ಧಕ್ಕೆಯಾಗಿರುವ ಶಾಲಾ ಕೊಠಡಿಗಳ ಕುರಿತು ಸಮಗ್ರ ಮಾಹಿತಿ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಅವರು ಸೂಚಿಸಿದರು.

ಹರ್ ಘರ್ ತಿರಂಗಾ ಅಭಿಯಾನದ ಮೂಲಕ ರಾಷ್ಟ್ರೀಯತೆ, ದೇಶಭಕ್ತಿಯ ಭಾವನೆಗಳು ಪ್ರತಿಯೊಬ್ಬರ ಹೃದಯದಲ್ಲಿ ಇಮ್ಮಡಿಗೊಳ್ಳುವಂತಾಗಬೇಕು. ಅಭಿಯಾನದ ಯಶಸ್ಸಿಗೆ ಸರಕಾರಿ ಇಲಾಖಾಧಿಕಾರಿಗಳು ಶ್ರಮ ವಹಿಸಬೇಕು ಎಂದು ಸಚಿವ ಆರಗ ಜ್ಞಾನೇಂದ್ರ ಸೂಚಿಸಿದರು.

ತಾಲೂಕಿನ ಹಲವು ಕಡೆಗಳಲ್ಲಿ ನಕಲಿ ಗೊಬ್ಬರಗಳ ಮಾರಾಟ, ವಿವಿಧ ಕಾಯಿಲೆಗಳಿಗೆ ಸಿದ್ದೌಷಧಿ ಎಂದು ಸ್ಟಿರಾಯ್ಡ್ ಹೊಂದಿರುವ ಮಾತ್ರೆಗಳನ್ನು ಮಾರಾಟ ಮಾಡುವವರ ಜಾಲ ಹಬ್ಬಿರುವುದು ಗಮನಕ್ಕೆ ಬಂದಿದೆ. ಎಲ್ಲಾ ಕಾಯಿಲೆಗಳಿಗೂ ಔಷಧ ಎಂದು ಜನರನ್ನು ನಂಬಿಸಿ ದಂಧೆ ನಡೆಸಲಾಗುತ್ತಿದೆ. ಅಮಾಯಕ ಜನರು ಇದಕ್ಕೆ ಬಲಿಯಾಗುತ್ತಿದ್ದು, ಅಂಗಾAಗ ವೈಫಲ್ಯದಂತಹ ಪ್ರಕರಣಗಳು ಕಂಡುಬರತೊಡಗಿದೆ. ತಜ್ಞ ವೈಧ್ಯರೊಬ್ಬರು ಈಬಗ್ಗೆ ತಮಗೆ ಮಾಹಿತಿ ನೀಡಿದ್ದಾರೆ. ಇಂತಹ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ತಾಲೂಕು ವೈಧ್ಯಾಧಿಕಾರಿಗೆ ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಲೋಕೋಪಯೋಗಿ ಇಲಾಖೆಗಳು ರಸ್ತೆ ನಿರ್ವಹಣೆ ಕರ‍್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಮಳೆಗಾಲದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಕೆಡಿಪಿ ಸದಸ್ಯ ನಾಗಾರ್ಜುನ ಸ್ವಾಮಿ ಆರೋಪಿಸಿದರು. ಕಳೆದ ವರ್ಷ ಎಸ್ ಆರ್ ದರಕ್ಕಿಂತಲೂ ಶೇ.30ರಷ್ಟು ಕಡಿಮೆ ಮೊತ್ತಕ್ಕೆ ಗುತ್ತಿಗೆ ಹಿಡಿದ ಗುತ್ತಿಗೆದಾರನಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ. ಕೇವಲ ಕಾಟಾಚಾರದ ಕೆಲಸ ಮಾಡಿ ಬಿಲ್ ಪಡೆಯುತ್ತಾರೆ ಎಂದು ಶಾಸಕ ಹರತಾಳು ಹಾಲಪ್ಪ ಅಸಮಧಾನ ವ್ಯಕ್ತಪಡಿಸಿದರು.

ಮಳೆಹಾನಿ ಹಾಗೂ ಪರಿಹಾರ ಕ್ರಮಗಳ ಕುರಿತು ಸಚಿವ ಆರಗ ಹಾಗೂ ಶಾಸಕ ಹಾಲಪ್ಪ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು. ವಿಪತ್ತು ಸಂಭವಿಸಿದಾಗ ತಾತ್ಸಾರ ತೋರದೇ, ತಕ್ಷಣದಲ್ಲಿ ಕಷ್ಟಕ್ಕೆ ಸ್ಪಂದಿಸಬೇಕು. ಪರಿಹಾರಗಳನ್ನು ಒದಗಿಸುವಲ್ಲಿ ವಿಳಂಬಧೋರಣೆ ಅನುಸರಿಸಬಾರದು ಎಂದು ಹೇಳಿದರು.
ಗ್ರಾಮ ಮಟ್ಟದಲ್ಲಿರುವ ಮಳೆ ಮಾಪಕಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದರಿಂದ ಹವಾಮಾನ ಆಧಾರಿತ ವಿಮೆ ರೈತರಿಗೆ ಸಿಗುತ್ತಿಲ್ಲ ಎಂದು ಸದಸ್ಯ ವಾಟಗೋಡು ಸುರೇಶ್ ಹೇಳಿದರು. ಇದಕ್ಕೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ ಧ್ವನಿಗೂಡಿಸಿದರು.

ಇತ್ತೀಚೆಗಷ್ಟೇ ನಿರ್ಮಾಣಗೊಂಡಿದ್ದ ಮಾರುತಿಪುರ ಸಮೀಪದ ನಿಂಬೇಸರ ಕಾಲುಸಂಕ ಸಮೀಪದ ಪೈಪುಗಳು ಮಳೆಯ ರಭಸಕ್ಕೆ ಕೊಚ್ಚಿ ಹೋಗಿರುವುದನ್ನು ಕುರಿತು ಸದಸ್ಯ ಶಾಬುದ್ದೀನ್ ಸಭೆಯ ಗಮನಕ್ಕೆ ತಂದರು. ಅಲ್ಲದೇ ಕಾರ್ಮಿಕ ಕಾರ್ಡ್ ಮಾಡಿಸುವಲ್ಲಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಅನಾವಶ್ಯಕವಾಗಿ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಭೆಯಲ್ಲಿ ತಹಸೀಲ್ದಾರ್ ವಿ.ಎಸ್.ರಾಜೀವ್, ತಾಪಂ ಕರ‍್ಯನಿರ್ವಹಣಾಧಿಕಾರಿ ಸಿ.ಆರ್.ಪ್ರವೀಣ್, ನಾಮನಿರ್ದೇಶಿತ ಸದಸ್ಯರಾದ ಕೆ.ವಿ.ಸುಬ್ರಮಣ್ಯ, ರಮೇಶ, ನಾಗೇಂದ್ರ ಮತ್ತಿತರರು ಇದ್ದರು.

Exit mobile version