
ಹೊಸನಗರ: ತೋಟಕ್ಕೆ ಬರುವ ಕಾಡುಪ್ರಾಣಿಗಳನ್ನು ಓಡಿಸಿ ಬರಲು ಹೋದ ಯುವಕ ನೋರ್ವ ನಿರ್ಲಕ್ಷತನದಿಂದ ಕಾಲುಜಾರಿ ಬಿದ್ದು ನಾಡಬಂದೂಕಿಗೆ ಬಲಿಯಾದ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನೇಗಿಲೋಣಿಯಲ್ಲಿ ನಡೆದಿದೆ.
ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ನೇಗಿಲೋಣಿ ನಿವಾಸಿ ಅಂಬರೀಷ (30) ಮೃತ ಯುವಕ.
ನೇಗಿಲೋಣಿ ಚಂದಾನಾಯ್ಕರ ಮಗ ಅಂಬರೀಷ್ ಶುಕ್ರವಾರ ರಾತ್ರಿ ಊಟ ಮುಗಿಸಿ ತೋಟಕ್ಕೆ ಬಂದ ಕಾಡುಪ್ರಾಣಿಗಳನ್ನು ಓಡಿಸಿ ಬರುವುದಾಗಿ ನಾಡಬಂದೂಕು ಹಿಡಿದು ಸ್ನೇಹಿತ ಕೀರ್ತಿ ಎಂಬಾತನ ಜೊತೆ ತೋಟಕ್ಕೆ ಹೋಗಿದ್ದಾನೆ. ಕಾಡು ಕೋಣಗಳನ್ನು ತೋಟದಿಂದ ಹೊರಗಡೆ ಓಡಿಸಿದ ಬಳಿಕ ಸ್ನೇಹಿತ ಕೀರ್ತಿ ಮನೆಗೆ ತೆರಳಿದ್ದಾನೆ. ಅಂಬರೀಷ್ ಕೂಡ ಮನೆಗೆ ಹೊರಟಿದ್ದ ಈ ವೇಳೆ ತನ್ನ ಕೈಯಲ್ಲಿದ್ದ ಬಂದೂಕನ್ನು ನಿರ್ಲಕ್ಷತನದಿಂದ ಹಿಡಿದುಕೊಂಡಿದ್ದು ರಾತ್ರಿ ವೇಳೆ ಬಂಡೆ ಇಳಿಯುವಾಗ ಕಾಲು ಜಾರಿ ಬಿದ್ದಿದ್ದಾನೆ. ಬಂದೂಕಿನ ಕುದುರೆಗೆ ಕಾಲಿನ ರಬ್ಬರ್ ಬೂಟ್ ತಾಗಿ ನಾಡ ಬಂದೂಕು ಸಿಡಿದಿದೆ. ಅಭಿಷೇಕನ ಎದೆಯ ಕೆಳಭಾಗದಿಂದ ಮೇಲ್ಬಾಗಕ್ಕೆ ಗುಂಡು ಹಾರಿದ ಪರಿಣಾಮ ತೀವ್ರ ರಕ್ತಸ್ರಾವಗೊಂಡು ಅಲ್ಲೆ ಮೃತಪಟ್ಟಿದ್ದಾನೆ.
ಈ ಸಂಬಂಧ ಮೃತ ಅಂಬರೀಷ್ ಸಹೋದರಿ ನಗರ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಪಿಎಸ್‌ಐ ನಾಗರಾಜ್ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.
ಗ್ರಾಮದಲ್ಲಿ ಶೋಕ:
ಗ್ರಾಮದ ಜನರ ವಿಶ್ವಾಸ ಗಳಿಸಿದ್ದ ಅಂಬರೀಷ್ ನೇಗಿಲೋಣಿ ನಿವಾಸಿ ಚಂದಾನಾಯ್ಕ್ ಇವರ ಮಗ. ಒರ್ವ ತಮ್ಮ, ಇಬ್ಬರು ಸಹೋದರಿಯರನ್ನು ಹೊಂದಿದ್ದು ಕುಟುಂಬದಲ್ಲಿ ಶೋಕ ತುಂಬಿದೆ. ಅಲ್ಲದೆ ಊರಿನ ಜನರ ಪ್ರೀತಿ ಗಳಿಸಿದ್ದ ಅಂಬರೀಷ್ ಸಾವು ಗ್ರಾಮದಲ್ಲೂ ಶೋಕ ಮಡುಗಟ್ಟೆದೆ.