
5 ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ : ಬಿ.ಜಿ.ಚಂದ್ರಮೌಳಿ |
ಹೊಸನಗರದಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸಿ ಕಾರ್ಯಕರ್ತರ ಆಕ್ರೋಶ
ಹೊಸನಗರ: ಬಿಜೆಪಿ ಜೆಡಿಎಸ್ ಯಾವುದೇ ಕುತಂತ್ರ ಮಾಡಿದರೂ ಸಿದ್ದರಾಮಯ್ಯರನ್ನು ಕೆಳಗಿಳಿಸಲು ಸಾಧ್ಯವಿಲ್ಲ. ಪೂರ್ತಿ 5 ವರ್ಷವೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ ಕೊಡೂರು ಹೇಳಿದ್ದಾರೆ.
ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ರಾಜ್ಯಪಾಲರ ವಿರುದ್ಧ ಬೃಹತ್ ಪ್ರತಿಭಟನೆಯ ನೇತೃತ್ಬವಹಿಸಿ, ಮೂಡಾ ಪ್ರಕರಣದಲ್ಲಿ ಸಿಎಂ ಪಾತ್ರವೇನೂ ಇಲ್ಲ ಎಂಬುದು ಜನಸಾಮಾನ್ಯರಿಗೆ ಅರ್ಥವಾಗುತ್ತದೆ. ಆದರೆ ರಾಜ್ಯಪಾಲರಿಗೆ ಅರ್ಥವಾಗದಿರುವುದು ವಿಪರ್ಯಾಸ ಎಂದು ಆರೋಪಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಕಲಗೋಡು ರತ್ನಾಕರ್, ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್, ಕನಿಷ್ಠ ಸಂಖ್ಯಾಬಲವೂ ಇಲ್ಲದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್, ಆ ಬಗ್ಗೆ ಕನಿಷ್ಠ ಕೃತಜ್ಞತೆಯೂ ಇಲ್ಲದೇ ಜನರು ಅಧಿಕಾರಕ್ಕೆ ತಂದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ ಮಾಡಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನುಡಿದಂತೆ 5 ಗ್ಯಾರಂಟಿಯನ್ನು ನೀಡಿದೆ. ಅದು ಸಾಧ್ಯವಿಲ್ಲ ಎನ್ನುತ್ತಿದ್ದ ಬಿಜೆಪಿ ಜೆಡಿಎಸ್ ಹತಾಶೆಗೊಂಡಿವೆ. ಹೀಗಾಗಿ ಭ್ರಷ್ಟಾಚಾರ ರಹಿತ ಮುಖ್ಯಮಂತ್ರಿ ಮೇಲೆ ಸುಳ್ಳು ಪ್ರಕರಣ ಸೃಷ್ಟಿ ಮಾಡಿ ಮೂಲೆಗುಂಪು ಮಾಡಲು ಯತ್ನಿಸುತ್ತಿವೆ ಎಂದು ಕಿಡಿಕಾರಿದರು.
ರಾಜ್ಯಪಾಲರ ಪ್ರತಿಕೃತಿ ದಹನ:
ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯಪಾಲರ ಪ್ರತಿಕೃತಿಗೆ ದಹಿಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಾಜ್ಯಪಾಲರು, ಕೇಂದ್ರ ಸರ್ಕಾರ, ಬಿಜೆಪಿ ಜೆಡಿಎಸ್ ವಿರುದ್ಧ ಧಿಕ್ಕಾರ ಕೂಗಿದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ನಂತರ ತಾಲೂಕು ಕಚೇರಿಗೆ ತೆರಳಿ ರಾಜ್ಯಪಾಲರನ್ನು ವಾಪಾಸು ಕರೆಸಿಕೊಳ್ಳುವಂತೆ ಆಗ್ರಹಿಸಿ ತಾಲೂಕು ಅಧಿಕಾರಿ ಸುಧೀಂದ್ರರಿಗೆ ಮನವಿ ಸಲ್ಲಿಸಿದರು.
ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುಮಾ ಸುಬ್ರಮಣ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಟೌನ್ ಘಟಕದ ಅಧ್ಯಕ್ಷ ಗುರುರಾಜ್, ನಗರ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಕರುಣಾಕರ ಶೆಟ್ಟಿ, ತೀರ್ಥಹಳ್ಳಿ ಕಾಂಗ್ರೆಸ್ ಕಾರ್ಯದರ್ಶಿ ಹಿಲ್ಕುಂಜಿ ಕುಮಾರ್, ಶಾಸಕರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು, ಪಪಂ ಸದಸ್ಯ ಅಶ್ವಿನಿಕುಮಾರ್, ಶಾಹಿನಾ ನಾಸೀರ್, ಪ್ರಮುಖರಾದ ಶ್ರೀನಿವಾಸ ಕಾಮತ್, ಸರ್ಕಲ್ ಮಹಾಬಲರಾವ್, ನೋರಾ ಮೆಟಿಲ್ಡಾ ಸಿಕ್ವೇರಾ, ಪ್ರವೀಣ ಬೃಂದಾವನ, ಎಂ.ಪಿ.ಸುರೇಶ್, ನಿತ್ಯಾನಂದ, ರಾಧಿಕಾ ಶ್ರೇಷ್ಠಿ, ನೇತ್ರಾ, ತಾಲೂಕು ಕಾಂಗ್ರೆಸ್ ವಿವಿಧ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.