
ಹೊಸನಗರ: ಪ್ರಕೃತಿ ಕೊಂಚ ಅಲುಗಿದರೆ ಸಾಕು. ಪ್ರಕೃತಿ ನೀಡುವ ಸಣ್ಣ ಏಟನ್ನು ಮನುಷ್ಯ ಎದುರಿಸಲು ಸಾಧ್ಯವಿಲ್ಲ. ಪರಿಸರದ ಮೇಲೆ ದಬ್ಬಾಳಿಕೆ ನಡೆಸುವ ಮುನ್ನ ಒಮ್ಮೆ ಯೋಚಿಸುವಂತೆ ಹೊಸನಗರದ ಮುನ್ಸಿಫ್ ಕೋರ್ಟ್ ನ್ಯಾಯಾಧೀಶ ರವಿ ಕುಮಾರ್ ಎಚ್ಚರಿಸಿದ್ದಾರೆ.
ಹೊಸನಗರದಲ್ಲಿ ಪುನೀತ್ ರಾಜಕುಮಾರ್ ಕನ್ನಡ ಸಂಘ ಹಮ್ಮಿಕೊಂಡಿದ್ದ ಮೈತುಂಬಿದ ಶರಾವತಿ ಹಿನ್ನೀರಿಗೆ ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪರಿಸರ ನಾಶ ಮಾಡುವುದೆಂದರೆ ನಮ್ಮ ನಾಳೆಗಳ ನಾಶ ಮಾಡಿಕೊಂಡಂತೆ ಎಂದರು.
ಬಾಗಿನ ಸಮರ್ಪಿಸಿದ ಮುನ್ಸಿಫ್ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಲತಾ, ಶರಾವತಿ ನದಿ ಪವಿತ್ರವಾಗಿದ್ದು ರೈತರ ಜೀವನಾಡಿಯಾಗಿದೆ. ಸ್ವಚ್ಚತೆ ಕಾಪಾಡುವ ಮೂಲಕ ನದಿಯ ಪಾವಿತ್ರತೆಯನ್ನು ಕಾಪಾಡಬೇಕು. ಶರಾವತಿ ನದಿ ಮೈದುಂಬಿದರೆ ಮಾತ್ರ ರೈತರ ಬದುಕು ಹಸನಾಗುತ್ತದೆ ಎಂದರು.
ಸಾನಿಧ್ಯವಹಿಸಿದ್ದ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಪ್ರಕೃತಿ ಆರಾಧನೆ ಎಂದರೆ ಭಗವಂತನ ಆರಾಧನೆ ಮಾಡಿದಂತೆ. ಸಮೃದ್ಧ ವನ್ಯಜೀವ ರಾಶಿಯನ್ನು ಹೊಂದಿದ್ದ ಮಲೆನಾಡಿನಲ್ಲೂ ಗಿಡ ನೆಡುವ ಅನಿವಾರ್ಯತೆ ಬಂದಿರುವುದು ವಿಪರ್ಯಾಸ. ಪ್ರಕೃತಿ ಮತ್ತು ಜಲಕ್ಕು ಅವಿನಾಭಾವ ಸಂಬಂಧವಿದೆ. ಪ್ರಕೃತಿ ಇದ್ದಲ್ಲಿ ಜಲ ಇರುತ್ತದೆ. ಜಲ ಸರಾಗವಾಗಿ ಹರಿಯುವಲ್ಲಿ ಪ್ರಕೃತಿ ಸಮೃದ್ಧವಾಗಿ ಬೆಳೆಯುತ್ತದೆ ಎಂದರು.
ಈ ವೇಳೆ ಕಾನೂನು ಸೇವಾ ಪ್ರಾಧಿಕಾರ, ಅರಣ್ಯ ಇಲಾಖೆ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ. ಗಿಡ ನೆಡುವ ಮೂಲಕ ವನ ಮಹೋತ್ಸವ ಆಚರಿಸಲಾಯಿತು.
ಪುನೀತ್ ರಾಜಕುಮಾರ್ ಸಂಘದ ಅಧ್ಯಕ್ಷ ಪ್ರಶಾಂತ್.ಎಸ್, ಅಧ್ಯಕ್ಷತೆ ವಹಿಸಿದ್ದರು.
ಸಂಘದ ಗೌರವಾಧ್ಯಕ್ಷ ಗಂಗಾಧರಯ್ಯ, ಎಸಿಎಫ್ ಕೆ.ಜಿ.ಪ್ರಕಾಶ್ , RFO ರಾಘವೇಂದ್ರ ಭಟ್, ಪ್ರಮುಖರಾದ ಎಂ.ಎನ್.ಸುಧಾಕರ್, ಬಾವಿಕಟ್ಟೆ ಸತೀಶ್, ಎನ್.ಆರ್.ದೇವಾನಂದ್, ಸೊನಲೆ ಶ್ರೀನಿವಾಸ್, ದಿವ್ಯ ಪ್ರವೀಣ್, ಶ್ರೀಧರ ಭಂಡಾರಿ, ವಿನಯಕುಮಾರ್, ಸಂತೋಷ ಶೇಟ್, ಇತರರು ಪಾಲ್ಗೊಂಡಿದ್ದರು.
ಎಂ.ಕೆ.ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು. ಸುಮಿತ್ ವಂದಿಸಿದರು.