ಶತಾಯುಷಿ ಮೀನಜ್ಜ ಅಪಘಾತದಲ್ಲಿ ಸಾವು : ಸ್ವಾವಲಂಬಿ ಬದುಕು ಕಂಡ ದೇವರಿಗೆ ಹುಲಿಕಲ್ ಜನರ ಕಂಬನಿ

ಶತಾಯುಷಿ ಮೀನಜ್ಜ ಅಪಘಾತದಲ್ಲಿ ಸಾವು : ಸ್ವಾವಲಂಬಿ ಬದುಕು ಕಂಡ ದೇವರಿಗೆ ಹುಲಿಕಲ್ ಜನರ ಕಂಬನಿ

ಹೊಸನಗರ: 102 ವರ್ಷ ಪ್ರಾಯ, ಮೀನು ಮಾರಿಕೊಂಡು ಇಂದಿಗೂ ಸ್ವಾವಲಂಬಿ ಬದುಕು ಸಾಗಿಸುತ್ತಿದ್ದ ಶತಾಯುಷಿ.. ಮೀನಜ್ಜ ಎಂದೇ ಮನೆಮಾತಾಗಿದ್ದ ದೇವರು ಇನ್ನಿಲ್ಲ..

ಹೌದು ಹುಲಿಕಲ್ ನಿವಾಸಿ 102 ವರ್ಷದ ಮೀನಜ್ಜ ಆಲಿಯಾಸ್ ಕೃಷ್ಣ ದೇವರು ಭಾನುವಾರ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ.

ರಾತ್ರಿ 8 ರಿಂದ 8.30ರ ಸುಮಾರಿಗೆ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ವೇಳೆ ಕಾರು.. ಟ್ಯಾಂಕರ್ ವೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಮೀನಜ್ಜನಿಗೆ ಡಿಕ್ಕಿ ಹೊಡೆದು ಹೋಗಿದೆ. ಮೀನಜ್ಜ ತೀವ್ರ ಗಾಯಗೊಂಡಿದ್ದು ನಗರ ಆಸ್ಪತ್ರೆಗೆ ಕರೆತರುವ ಮುನ್ನವೇ ಸಾವನ್ನಪ್ಪಿದ್ದಾರೆ.

ಹಿಟ್ ಅಂಡ್ ರನ್:
ಅಪಘಾತ ಸಂಭವಿಸಿದರು ಕೂಡ ಕಾರು ನಿಲ್ಲಿಸದೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುಧೀರ್ಘ ಸ್ವಾವಲಂಬಿ ಬದುಕು:
ಇಂದು 50 ವರ್ಷ ದಾಟುವ ಮುನ್ನವೇ, ನಿತ್ರಾಣ, ನಿಶಕ್ತಿ, ರೋಗ, ಇನ್ನಿತರ ಸಮಸ್ಯೆಗಳಿಂದ ಬಳಲುವಂತ ಸನ್ನಿವೇಶದಲ್ಲಿ ಮೀನಜ್ಜ ಬದುಕಿದ್ದು 102 ವರ್ಷ. ಅಪಘಾತ ಆಗದಿದ್ದರೇ ಇನ್ನು ಹಲವು ವರ್ಷ ಬದುಕುವ ಗಟ್ಟಿ ಜೀವ ಅವರದ್ದಾಗಿತ್ತು.
ಮೀನು ಹಿಡಿದು, ಮಾರಾಟ ಮಾಡಿ‌ ಬದುಕು ಕಟ್ಟಿಕೊಂಡಿದ್ದ ಮೀನಜ್ಜ ಹುಲಿಕಲ್ ನಲ್ಲಿ ತಾವೇ ನಿರ್ಮಿಸಿಕೊಂಡ ಶೆಡ್ ನಲ್ಲಿ ವಾಸ ಮಾಡಿಕೊಂಡಿದ್ದರು. ಪತ್ನಿಯನ್ನು ಕಳೆದುಕೊಂಡು ಏಕಾಂಗಿಯಾಗಿದ್ದ ಮೀನಜ್ಜ.. ಕಾರವಾರದಲ್ಲಿರುವ ಮೊಮ್ಮಕ್ಕಳು ಕರೆದರೂ ಹೋಗದೇ ಸ್ವಾವಲಂಬಿ‌ ಬದುಕು ಸಾಗಿಸುತ್ತಿದ್ದರು.

ಯಾರಲ್ಲಿ ಏನನ್ನು ಬೇಡದೇ ಸ್ವಂತ ಪರಿಶ್ರಮದ ಬದುಕು ಅವರದ್ದಾಗಿತ್ತು. ಇಂದಿನ ಜನರಿಗೆ ಮಾದರಿಯಾಗಿದ್ದ ಅವರು ಕಾಯಕವೇ ಕೈಲಾಸ ಎಂಬಂತೆ ಬದುಕಿ ನಿಜ ಅರ್ಥದಲ್ಲಿ ಅವರ ಹೆಸರಿನಂತೆ ದೇವರಾಗಿದ್ದರು.

ಘಟನೆ ತಿಳಿಯುತ್ತಿದ್ದಂತೆ ಸಿಪಿಐ ಗುರಣ್ಣ ಎಸ್ ಹೆಬ್ಬಾಳ, ಪಿಎಸ್ಐ ಶಿವಾನಂದ್ ಕೋಳಿ ಸಿಎಂ ಬಂದೋಬಸ್ತ್ ಗೆ ತೆರಳಿದ್ದ ಕಾರಣ ಎಎಸ್ಐ ಕುಮಾರ್, ಮಾಸ್ತಿಕಟ್ಟೆ ಉಪಠಾಣೆ ಸಿಬ್ಬಂದಿ ಅರುಣೋದಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಿಟ್ ಅಂಡ್ ರನ್ ಮಾಡಿದ ಕಾರಿನ ಶೋಧ ಕಾರ್ಯ ಆರಂಭಿಸಿದ್ದಾರೆ.

ಮೀನಜ್ಜ ಕೃಷ್ಣ ದೇವರಿಗೆ ಓರ್ವ ಮಗನಿದ್ದು ಆತ ಕೂಡ ಹಿಂದೆಯೇ ಸಾವನ್ನಪ್ಪಿದ್ದಾರೆ. ಕಾರವಾರದಲ್ಲಿ ಅವರ ಮೊಮ್ಮಕ್ಕಳು ವಾಸಿಸುತ್ತಿದ್ದು ಅಜ್ಜನ ಸಾವಿನ ಸುದ್ದಿ ಕೇಳಿ ಹುಲಿಕಲ್ ಗೆ ದೌಡಾಯಿಸಿದ್ದಾರೆ. ಮೃತದೇಹ ನಗರ ಆಸ್ಪತ್ರೆಯ ಶವಾಗಾರದಲ್ಲಿದ್ದು ಮರಣೋತ್ತರ ಪರೀಕ್ಷೆಯ ಬಳಿಕ ಹುಲಿಕಲ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಮೊಮ್ಮಕ್ಕಳು ತಿಳಿಸಿದ್ದಾರೆ.

Exit mobile version