ಪರ್ಯಾಯ ಮಾರ್ಗ ಸೂಚಿ ಫಲಕ ಅಳವಡಿಕೆ ವಿಫಲ: ಹುಲಿಕಲ್ ಮಾರ್ಗದಲ್ಲೇ ಬರುತ್ತಿರುವ ಬೃಹತ್ ವಾಹನಗಳ ಪರದಾಟ: ತಿಂಗಳ ಸಮಯ ಇದ್ದರು ಕೂಡ ಅಗತ್ಯ ಕ್ರಮ ಕೈಗೊಳ್ಳದ PWD ಬಗ್ಗೆ ಆಕ್ರೋಶ!

ಪರ್ಯಾಯ ಮಾರ್ಗ ಸೂಚಿ ಫಲಕ ಅಳವಡಿಕೆ ವಿಫಲ:
ಹುಲಿಕಲ್ ಮಾರ್ಗದಲ್ಲೇ ಬರುತ್ತಿರುವ ಬೃಹತ್ ವಾಹನಗಳ ಪರದಾಟ: ಅನಗತ್ಯ ವೆಚ್ಚಕ್ಕೆ ಹೊಣೆ ಯಾರು?.. ತಿಂಗಳ ಸಮಯ ಇದ್ದರು ಕೂಡ ಅಗತ್ಯ ಕ್ರಮ ಕೈಗೊಳ್ಳದ PWD ಬಗ್ಗೆ ಆಕ್ರೋಶ!

ಹೊಸನಗರ: ರಾಜ್ಯದ ಪ್ರಮುಖ ಮಾರ್ಗಗಳಲ್ಲೊಂದಾದ ಹುಲಿಕಲ್ ಘಾಟ್ (ಬಾಳೆಬರೆ) ಮಾರ್ಗ ಕುಸಿತದ ಕಂಡು ಬಂದ ಹಿನ್ನೆಲೆಯಲ್ಲಿ ಆ.6 ರಿಂದ ಬೃಹತ್ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಆದರೆ ಅಗತ್ಯ ಸ್ಥಳಗಳಲ್ಲಿ ಪರ್ಯಾಯ ಮಾರ್ಗ ಸೂಚಿ ಫಲಕ ಅಳವಡಿಸದ ಕಾರಣ ಹುಲಿಕಲ್ ಘಾಟ್ ತನಕ ಬಂದು ವಾಪಾಸು ಹೋಗುತ್ತಿರುವ ಬೃಹತ್ ವಾಹನಗಳ ಪರದಾಟ ಕಂಡು ಬಂದಿದೆ.

ಹುಲಿಕಲ್ ಮಾರ್ಗದ ಬದಲಿಗೆ ನಗರ – ಕೊಲ್ಲೂರು – ಬೈಂದೂರು – ಹೊನ್ನಾವರ ಮಾರ್ಗ ಸೂಚಿಸಲಾಗಿದೆ. ಆದರೆ ಪರ್ಯಾಯದ ಹಲವು ಮಾರ್ಗಗಳ ತಿರುವಿನ ಜಾಗದಲ್ಲಿ ಈವರೆಗೂ ಮಾರ್ಗ ಸೂಚಿ ಫಲಕ ಅಳವಡಿಸಿಲ್ಲ. ಹೀಗಾಗಿ ಮಾಹಿತಿ ಇರದ ಹಲವು ಬೃಹತ್ ಲಾರಿಗಳು ದಿನಂಪ್ರತಿ ಇದೇ ಮಾರ್ಗದಲ್ಲಿ ಬರುತ್ತಿವೆ. ಹತ್ತಿರಕ್ಕೆ ಬಂದ ಮೇಲೆ ಸಂಚಾರ ನಿಷೇಧ ಮಾಹಿತಿ ಸಿಕ್ಕ ನಂತರ ಬೇರೆ ದಾರಿ ಕಾಣದೇ ವಾಪಾಸಾಗುವಂತಾಗಿದೆ.

ತೀರ್ಥಹಳ್ಳಿ ಕೈಮರ, ಶಿವಮೊಗ್ಗ ಆಯನೂರು ಮಾರ್ಗದಿಂದ ಹೆಚ್ಚಿನ ಲಾರಿಗಳು ಬರುತ್ತಿವೆ. ಪರ್ಯಾಯ ಮಾರ್ಗಕ್ಕೆ ತಿರುಗ ಬೇಕಾದ ಮಹತ್ವದ ಕ್ರಾಸ್ ಗಳಲ್ಲಿ‌ ಪರ್ಯಾಯ ಮಾರ್ಗದ ಅಗತ್ಯ ಮಾರ್ಗ ಸೂಚಿ ಫಲಕವನ್ನು ಈತನಕ ಅಳವಡಿಸಿಲ್ಲ. ಹತ್ತಿರಕ್ಕೆ ಬಂದ ಮೇಲೆ, ಬಾರಿ ದೂರದಿಂದ ಬಂದಿದ್ದೇವೆ. ಡಿಸೇಲ್ ಕೊರತೆ ಇದೆ, ವೆಚ್ಚ ಹೆಚ್ಚಾಗುತ್ತದೆ. ಇದನ್ನು ಚಾಲಕರೇ ಭರಿಸಬೇಕು. ಈ ಮಾರ್ಗದಲ್ಲಿ ಬಂದ ತಪ್ಪಿಗೆ ಒಮ್ಮೆ ಈ ಮಾರ್ಗದಲ್ಲಿ ಅವಕಾಶ ಕೊಡಿ ಎಂದು ಹುಲಿಕಲ್ ಹತ್ತಿರದ ಚೆಕ್ ಪೋಸ್ಟ್ ಗಳಲ್ಲಿ ಗೋಗೆರೆಯುವಂತೆ ಮಾಡಿದೆ. ನಂತರ ಬೇರೆ ದಾರಿ ಕಾಣದೇ ಶಾಪ ಹಾಕಿಕೊಂಡು‌ ವಾಪಾಸು ಹೋಗುವಂತೆ ಮಾಡಿದೆ.

ಹುಲಿಕಲ್ ಮಾರ್ಗ ನಿಷೇಧ ಮಾಡುವ ಮುನ್ನ ಒಂದು ತಿಂಗಳ ಸಮಯ ಇದ್ದರು ಕೂಡ.. ಲೋಕೋಪಯೋಗಿ ಇಲಾಖೆ ಪರ್ಯಾಯ ಮಾರ್ಗ ಸೂಚಿ ಫಲಕ ಅಳವಡಿಕೆ ಸೇರಿದಂತೆ ಯಾವುದೇ ಅಗತ್ಯ ಕ್ರಮ ಕೈಗೊಂಡಿಲ್ಲ. ಇದು ಬೃಹತ್ ಲಾರಿಗಳ ಸಮಸ್ಯೆಗೆ ಕಾರಣವಾಗಿದ್ದು ದಿನಂಪ್ರತಿ ಹತ್ತಾರು ಲಾರಿ, ಟ್ರಕ್, ಕಂಟೈನರ್ ವಾಹನಗಳು ಮಾಸ್ತಿಕಟ್ಟೆಗೆ ಬಂದು ವಾಪಾಸಾಗುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಚಾಲಕರ ಈ ಗೋಳನ್ನು ನೋಡಲಾಗುತ್ತಿಲ್ಲ. ಕೂಡಲೇ ಅಗತ್ಯ ಕ್ರಾಸ್ ಗಳಲ್ಲಿ ಮಾರ್ಗ ಸೂಚಿ ಫಲಕ ಅಳವಡಿಸಲು ಮಾಸ್ತಿಕಟ್ಟೆ ಬಾಲಚಂದ್ರ, ಕೃಷ್ಣಾನಂದ ಸೇರಿದಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Exit mobile version