SAGAR |ಆನಂದಪುರ: 5 ಕಲ್ಲು ಗಣಿಗಾರಿಕೆ ಮೇಲೆ ಗಣಿ ಅಧಿಕಾರಿಗಳ ದಾಳಿ | ಎರಡು ಲಾರಿ ಒಂದು ಟ್ರಾಕ್ಟರ್ ವಶ | ಒಂದು ಕಲ್ಲು ಕಟ್ಟಿಂಗ್ ಮಿಷನ್ ನಾಶ!

ಆನಂದಪುರ(ಸಾಗರ): ಮಲ್ಲಂದೂರು ದಾಸನಕೊಪ್ಪ, ಚೆನ್ನಶೆಟ್ಟಿಕೊಪ್ಪ, ಅಬಸೆ, ಜಂಬಾನಿ ಸೇರಿದಂತೆ 5 ಕಲ್ಲು ಗಣಿಗಾರಿಕೆ ಮೇಲೆ ಗಣಿ ಅಧಿಕಾರಿಗಳು ದಾಳಿ ನಡೆಸಿ ಎರಡು ಲಾರಿ, ಒಂದು ಟ್ರಾಕ್ಟರ್ ವಶ ಪಡಿಸಿಕೊಂಡು ಒಂದು ಕಲ್ಲು ಕಟ್ಟಿಂಗ್ ಮಿಷನ್ ನಾಶ ಪಡಿಸಿದ ಘಟನೆ ಶನಿವಾರ ನಡೆದಿದೆ.

ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಖಚಿತ ಮಾಹಿತಿ ಆಧರಿಸಿ ಹಿರಿಯ ಗಣಿ ಅಧಿಕಾರಿ ನವೀನ್ ಎಸ್.ಟಿ ಸೂಚನೆಯಂತೆ ದಾಳಿ ನಡೆಸಿದ ಭೂವಿಜ್ಞಾನಿ ಅವಿನಾಶ್ ಎಸ್ ಮತ್ತು ತಂಡ 5 ಕಲ್ಲುಕ್ವಾರಿಗಳ ಮೇಲೆ ದಾಳಿ ನಡೆಸಿದೆ.

ಈ ವೇಳೆ ಅಕ್ರಮ ಕಲ್ಲುಗಣಿಕೆಗೆ ಬಳಸಲಾದ ಮಲ್ಲಂದೂರು ಕ್ವಾರಿಯಲ್ಲಿ ಒಂದು ಲಾರಿ, ದಾಸನಕೊಪ್ಪ ಕಲ್ಲುಕ್ವಾರಿಯಲ್ಲಿ ಒಂದು ಲಾರಿ ಮತ್ತು ಒಂದು ಟ್ರಾಕ್ಟರ್ ನ್ನು ವಶಪಡಿಸಿಕೊಂಡಿದೆ. ಅಲ್ಲದೇ ಕ್ವಾರಿಯಲ್ಲಿ ಕಂಡು ಬಂದ ಕಲ್ಲು ಕಟಿಂಗ್ ಮಿಷನ್ ವಶಪಡಿಸಿಕೊಂಡು ಅಧಿಕಾರಿಗಳು‌ ನಾಶಪಡಿಸಿದ್ದಾರೆ.

ಅಧಿಕಾರಿಗಳ ವಾಹನ ಅಡ್ಡಗಟ್ಟಿ ಆಕ್ರೋಶ:

ಈ ವೇಳೆ ಗಣಿಗಾರಿಕೆ ನಡೆಸುವವರು ಗಣಿ ಅಧಿಕಾರಿಗಳ ವಾಹನ ಅಡ್ಡಗಟ್ಟಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅಕ್ರಮ ಕಂಡು ಬಂದಲ್ಲಿ ದಂಡ ಹಾಕಿ ಅದು ಬಿಟ್ಟು ಮಿಷನ್ ನಾಶಗೊಳಿಸಿದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ದಾಳಿ ನಡೆಸುವಾಗ ಗಣಿಗಾರಿಕೆ ನಡೆಸುವವರು ಕಂಡು ಬಂದರೆ ದಂಡ ವಿಧಿಸಬಹುದು. ಪರಾರಿ ಆದರೆ ಅಕ್ರಮ ನಡೆಸುತ್ತಿದ್ದಾರೆ ಎಂದು ಅರ್ಥವಲ್ಲವೇ, ಅಲ್ಲದೇ ಪರವಾನಿಗೆ ಇಲ್ಲದೇ ಕಲ್ಲು ಕಟ್ಟಿಂಗ್ ಮಿಷನ್ ಇಟ್ಟುಕೊಳ್ಳುವುದು ಅಪರಾಧ ಹಾಗಾಗಿ ನಾಶಪಡಿಸಲಾಗಿದೆ ಎಂದು ಗಣಿ ಅಧಿಕಾರಿ ಅವಿನಾಶ್ ಸ್ಪಷ್ಟನೆ ನೀಡಿದರು.

 

ಕ್ರಮ ಕೈಗೊಳ್ಳಲು ಆಗ್ರಹ:

ಈ ನಡುವೆ ಈಭಾಗದಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ಎಲ್ಲೆಂದರಲ್ಲಿ ನಡೆಸಲಾಗುತ್ತಿದೆ. ಅಲ್ಲದೇ ಅಧಿಕಾರಿಗಳು ಕೂಡ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡದಿರುವುದು ಸರಿಯಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ವಶಕ್ಕೆ ಪಡೆದುಕೊಂಡು ಎರಡು ಲಾರಿ ಮತ್ತು ಒಂದು ಟ್ರಾಕ್ಟರ್ ನ್ನು ಹತ್ತಿರದ ಪೊಲೀಸ್ ಠಾಣೆಗೆ ಮುಂದಿನ ಕ್ರಮಕ್ಕೆ ಒಪ್ಪಿಸಲಾಗಿದೆ.

Exit mobile version