
ದೇವಸ್ಥಾನಗಳು ಜಾತಿ ನಿರ್ಮೂಲನೆಯ ಕೇಂದ್ರಗಳಾಗಬೇಕು : ಚಿಕ್ಕಪೇಟೆ ಶ್ರೀಮಹಾಗಣಪತಿ ದೇಗುಲದ ಅಂಗಾರಕ ಸಂಕಷ್ಠೀ ಕಾರ್ಯಕ್ರಮದಲ್ಲಿ ಮೂಲೆಗದ್ದೆ ಶ್ರೀ ಅಭಿಮತ
ಹೊಸನಗರ: ದೇವರಿಗೆ ಜಾತಿ ಇಲ್ಲ. ಅವನಿಗಿರೋದು ಭಕ್ತ ಸಮೂಹ ಒಂದೇ.. ಹಾಗಾಗಿ ದೇವಸ್ಥಾನಗಳು ಜಾತಿ ನಿರ್ಮೂಲನಾ ಕೇಂದ್ರಗಳಾಗಬೇಕು ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಪ್ರತಿಪಾದಿಸಿದರು.
ತಾಲೂಕಿನ ಚಿಕ್ಕಪೇಟೆ ಶ್ರೀ ಮಹಾಗಣಪತಿ ದೇವಾಲಯದಲ್ಲಿ ನಡೆದ ಅಂಗಾರಕ ಸಂಕಷ್ಠೀ ಮತ್ತು ಕಾರ್ತಿಕ ದೀಪೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಯಾವುದೇ ದೇವಾಲಯಗಳನ್ನು ಭಕ್ತರನ್ನು ಹೊಂದಿರಬೇಕು ಹೊರತು ಜಾತಿಗಳನ್ನಲ್ಲ. ಸರ್ವ ಭಕ್ತರು ಬಂದು ಆರಾಧಿಸುವ ದೇವಾಲಯಗಳಲ್ಲಿ ಮಾತ್ರ ದೇವರು ಸಂತೃಪ್ತಿ ಹೊಂದಲು ಸಾಧ್ಯ ಎಂದರು.
ಕಾರ್ತಿಕ ದೀಪೋತ್ಸವಕ್ಕೆ ಪುರಾಣ ಕಾಲದಿಂದಲೂ ಮಹತ್ವದ ಸ್ಥಾನವಿದೆ. ವಿಘ್ನ ನಿವಾರಕ, ಪ್ರಥಮ ಪೂಜಿತ ಗಣಪತಿಗೆ ಮಂಗಳವಾರ ಬರುವ ಸಂಕಷ್ಟಹರ ಚತುರ್ಥಿ ವಿಶೇಷವಾಗಿದೆ. ಆ ದಿನದ ಕಾರ್ತಿಕ ದೀಪೋತ್ಸವಕ್ಕೆ ವಿಶೇಷ ಶಕ್ತಿಯಿದೆ ಎಂದರು.
ದೀಪ ಎಂದರೆ ಬೆಳಕು. ನಮಗೆ ಬೇಕಿರುವುದು ಸುಜ್ಞಾನದ ಬೆಳಕು. ಹಣತೆ ಉರಿದಷ್ಟು ಪರಿಸರ ಆಕರ್ಷಕವಾಗಿರುತ್ತದೆ. ನಮ್ಮಲ್ಲಿರುವ ಸ್ವಾರ್ಥ ಲಾಲಸೆಯ ಕತ್ತಲಿನಿಂದ ಬರಲು ಬೆಳಕು ಅನಿವಾರ್ಯ. ಅಂತಹ ಮಹತ್ವದ ಬೆಳಕು ಸರ್ವರ ಮನೆ, ಮನಗಳಲ್ಲಿ ಬೆಳಗಬೇಕು ಎಂದರು.
ಇದೇ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ನಾವುಡ, ಸೇವಾ ಕಾರ್ಯಕರ್ತ ಗಿರಿಜಮ್ಮ ವೆಂಕಪ್ಪ ಪೂಜಾರಿ, ಚಂಡೆ ಸೇವಕ ಅಭಿ, ಭಕ್ತರಿಗೆ ಉಚಿತ ಕಬ್ಬಿನಹಾಲಿನ ಸೇವೆ ನೀಡಿದ ಅರುಣ ವಿಠಲ ಕುಟುಂಬದವರನ್ನು ಶ್ರೀಗಳು ಆಶೀರ್ವದಿಸಿ ಅಭಿನಂದಿಸಿದರು. ಶ್ರೀಗಳ ಮುಂದೆ ಸರ್ಕಾರಿ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿನಿ ಹಿತ ಕರುಣಾಕರ ಶೆಟ್ಟಿ 101 ಕೌರವರ ಹೆಸರು ಪಟಪಟನೇ ಹೇಳಿ ಗಮನ ಸೆಳೆದಳು.
ಇದಕ್ಕು ಮುನ್ನ ದೇವಸ್ಥಾನದ ಮುಖ್ಯದ್ವಾರದಿಂದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತ, ಚಂಡೆ ವಾದನದೊಂದಿಗೆ ಅದ್ದೂರಿ ಮೆರವಣಿಗೆಯಲ್ಲಿ ದೇಗುಲಕ್ಕೆ ಕರೆತರಲಾಯಿತು. ಶ್ರೀ ಗಣಪತಿ ದೇವರಿಗೆ ಕಾರ್ತಿಕ ಪೂಜೆ, ಅಂಗಾರಕ ಸಂಕಷ್ಠಿಯ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ತಹಶೀಲ್ದಾರ್ ರಶ್ಮಿ ಹಾಲೇಶ್, ದೇವಸ್ಥಾನ ಸಮಿತಿ ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಶ್ರೀಧರ್, ಸಾಗರ ನಗರಸಭೆ ಮಾಜಿ ಸದಸ್ಯ ಸತೀಶಬಾಬು, ಗ್ರಾಪಂ ಉಪಾಧ್ಯಕ್ಷೆ ಸುಮನಾ, ಸದಸ್ಯರಾದ ಕರುಣಾಕರಶೆಟ್ಟಿ, ವಿಶ್ವನಾಥ ಎಂ ಪ್ರಮುಖರಾದ ಶ್ರೀನಿವಾಸ ರಾವ್, ಹರೀಶ ವಕ್ರತುಂಡ, ಭಜನಾ ತಂಡದ ಸದಸ್ಯರು, ದೇವಸ್ಥಾನದ ಪ್ರತಿನಿಧಿಗಳು ಭಾಗವಹಿಸಿದ್ದರು.
ಹರೀಶ ನರಹರಿರಾವ್ ಕಾರ್ಯಕ್ರಮ ನಿರ್ವಹಿಸಿದರು.