ಪ್ರದೇಶ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷರಾಗಿ ಮಧು ಬಂಗಾರಪ್ಪ | ಕೂಡಲೇ ಅಧಿಕಾರ ವಹಿಸಿಕೊಳ್ಳಲು ಎಐಸಿಸಿ ಸೂಚನೆ

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ಘಟಕದ (OBC) ಅಧ್ಯಕ್ಷರಾಗಿ ಮಾಜಿ ಶಾಸಕ ಮಧು ಬಂಗಾರಪ್ಪರನ್ನು ನೇಮಕ ಮಾಡಲಾಗಿದೆ.

ಈ ಸಂಬಂಧ ಬುಧವಾರ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಹಿಂದುಳಿದ ವರ್ಗಗಳ ಸಂಘಟನೆ ಬಲಪಡಿಸಲು ಮುಂದಾಗುವಂತೆ ಎಐಸಿಸಿ ಆದೇಶದಲ್ಲಿ ಸೂಚಿಸಲಾಗಿದೆ.

ಇಷ್ಟು ವರ್ಷಗಳ ಕಾಲ ಜೆಡಿಎಸ್ ನಲ್ಲಿ ಇದ್ದ ಮಧು ಬಂಗಾರಪ್ಪ ಕಳೆದ ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ನಿಂದ ಅಂತರ ಕಾಯ್ದುಗೊಂಡಿದ್ದರು. ಆ ಬಳಿಕ ಅವರನ್ನು ಕಾಂಗ್ರೆಸ್ ಗೆ ಕರೆತರಲಾಗಿತ್ತು.

ಶಿವಮೊಗ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಈಡಿಗ ಸಮುದಾಯದ ಪ್ರಾಬಲ್ಯವಿದೆ. ಅದೇ ಸಮುದಾಯಕ್ಕೆ ಸೇರಿದ ಮಧು ಬಂಗಾರಪ್ಪರಿಗೆ ಈ ಸ್ಥಾನ ನೀಡುವ ಮೂಲಕ ಪಕ್ಷವನ್ನು ಬಲಗೊಳಿಸುವ ಲೆಕ್ಕಾಚಾರ ಹೈಕಮಾಂಡ್ ಹೊಂದಿದೆ ಎನ್ನಲಾಗಿದೆ.

ಹಿಂದುಳಿದ ವರ್ಗಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಮಧುಗೆ ಮಾಜಿ‌ ಮುಖ್ಯಮಂತ್ರಿ, ತಂದೆ ಎಸ್.ಬಂಗಾರಪ್ಪರ ನಾಮಬಲ ಕೂಡ ಇದೆ. ಇದರ ಪ್ರಯೋಜನ ಪಕ್ಷಕ್ಕೆ ಸಿಗಲಿದೆ ಎಂಬ ನಿರೀಕ್ಷೆ ಕೂಡ ಕಾಂಗ್ರೆಸ್ ಹೈಕಮಾಂಡ್ ಹೊಂದಿದೆ ಎನ್ನಲಾಗಿದೆ.

Exit mobile version