ಕಣ್ಮುಚ್ಚಿ ಕುಳಿತರೇ.. ಇಲ್ಲ ಕಣ್ಣಿದ್ದು ಕುರುಡಾದರೇ ಹೆದ್ದಾರಿ ಅಧಿಕಾರಿಗಳು ?.. ಅರೋಡಿ‌ ಕ್ರಾಸ್. ಹಿಲ್ಕುಂಜಿ ಅಪ್ ಕಡೆ ದಯವಿಟ್ಟು ಒಮ್ಮೆ ಬನ್ನಿ ಸ್ವಾಮಿ..

ಹೊಸನಗರ: ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಕಾರಗಡಿಯಿಂದ ಹಿಲ್ಕುಂಜಿ ವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳದ್ದೆ ದರ್ಬಾರ್ ಆಗಿದೆ.

ಕಳೆದ ಎರಡು ತಿಂಗಳಿಂದ ಗುಂಡಿಗಳ ಅವ್ಯವಸ್ಥೆ ಸೃಷ್ಟಿಯಾಗಿದ್ದರು ಕೂಡ ಹೆದ್ದಾರಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಹೆದ್ದಾರಿ ಅವಾಂತರಕ್ಕು ನಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ.. ಇಲ್ಲವೇ ಕಣ್ಣಿದ್ದು ಕುರುಡಾಗಿದ್ದಾರೆಯೇ ಎಂದು ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ.

ರಸ್ತೆ, ತಿರುವು ಭಾಗದಲ್ಲಿ ಬೃಹತ್ ಗುಂಡಿಗಳು ಬಿದ್ದಿವೆ. ಅದರಲ್ಲೂ ಹಿಲ್ಕುಂಜಿ ಅಪ್, ಆರೋಡಿ ಕ್ರಾಸ್ ಭಾಗದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಈಗಾಗಲೇ ಈ ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಧಿಕಾರಿಗಳು ತುರ್ತಾಗಿ ಗಮನ ಹರಿಸಬೇಕಿದೆ ಎಂಬ ಒತ್ತಾಯ ನಿರಂತರವಾಗಿದೆ.

ಈ ಹೆದ್ದಾರಿಯಲ್ಲಿ ಮಂಗಳೂರು ಕಡೆಯಿಂದ ಶಿವಮೊಗ್ಗ, ಬಳ್ಳಾರಿ ಕಡೆ ಪೆಟ್ರೋಲಿಯಂ ಉತ್ಪನ್ನ, ಸರಕು ಹೊತ್ತು ಲಾರಿಗಳು, 20 ಚಕ್ರದವರೆಗಿನ ಬೃಹತ್ ವಾಹನಗಳು ದಿನಂಪ್ರತಿ ಸಂಚರಿಸುತ್ತಿದ್ದು ಪರದಾಡುವಂತಾಗಿದೆ. ದಿನಂಪ್ರತಿ ಒಂದಲ್ಲ ಒಂದು ವಾಹನ ಕೆಟ್ಟು ನಿಲ್ಲುವಂತಾಗಿದೆ. ಆದರೂ ಗಮನ ಹರಿಸದಿರುವುದು ಅಧಿಕಾರಿಗಳ ನಿರ್ಲಕ್ಷಕ್ಕೆ ಸಾಕ್ಷಿಯಂತಾಗಿದೆ.

ಇನ್ನು ಕಾರು, ಜೀಪ್ ಸೇರಿದಂತೆ ನಾಲ್ಕು ಚಕ್ರದ ವಾಹನಗಳು ಹೊಂಡ ಇಳಿದರೆ ಪಲ್ಟಿ ಹೊಡೆಯುವ ಹಾಗಾಗಿದೆ. ಈ ರಸ್ತೆ ಯಲ್ಲಿ ಕೊಲ್ಲೂರು, ಕುಂದಾಪುರ, ಉಡುಪಿ, ಮಂಗಳೂರು, ಶಿವಮೊಗ್ಗ, ಬಳ್ಳಾರಿ, ದಾವಣಗೆರೆ ಭಾಗದ ಬಸ್ಸುಗಳು ಓಡಾಡುತ್ತಿದ್ದು ಹದಗೆಟ್ಟ ರಸ್ತೆ ಆತಂಕ ಮೂಡಿಸಿದೆ.

ಅದರಲ್ಲೂ ಜಿಟಿಜಿಟಿ ಮಳೆಯಾಗುತ್ತಿರುವ ಕಾರಣ ರಸ್ತೆ ಇನ್ನಷ್ಟು ಹಾಳಾಗಿದ್ದು ರಾತ್ರಿ ವೇಳೆಯ ಸಂಚಾರ ಭಯ ಹುಟ್ಟಿಸುವಂತಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಸೆಳೆದರು ಪ್ರಯೋಜನವಿಲ್ಲ ಎಂಬುದು ಪ್ರಯಾಣಿಕರ ಆಕ್ರೋಶವಾಗಿದೆ.

ಕೂಡಲೇ ರಸ್ತೆ ದುರಸ್ಥಿ ಮಾಡಬೇಕು. ಸುಗಮ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version