
ತೀರ್ಥಹಳ್ಳಿಯಲ್ಲಿ ಪತ್ರಕರ್ತರ ಧರಣಿ
ಹೊಸನಗರ: ಪತ್ರಕರ್ತನ ಮೊಬೈಲ್ ಕಸಿದುಕೊಂಡು ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಮಾಡುವುದಾಗಿ ಬೆದರಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿ ಇನ್ಸಪೆಕ್ಟರ್ ಅಶ್ವತ್ಥಗೌಡ ವಿರುದ್ಧ ಪತ್ರಕರ್ತರು ಪೊಲೀಸ್ ಠಾಣೆ ಮುಂಭಾಗ ಧರಣಿ ನಡೆಸಿದರು.
ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತ ವಿ.ನಿರಂಜನ್ ವರದಿಗಾರಿಕೆಗೆ ತೆರಳಿದ್ದರು. ಜಿಲ್ಲಾ ರಕ್ಷಣಾಧಿಕಾರಿ ಠಾಣೆಯಿಂದ ನಿರ್ಗಮಿಸುವಾಗ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಪತ್ರಕರ್ತ ನಿರಂಜನ್ ಅದನ್ನು ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಿದ್ದರು. ಈ ವೇಳೆ ಏಕಾಏಕಿ ಇನ್ಸಪೆಕ್ಟರ್ ಅಶ್ವತ್ಥಗೌಡ ಮೊಬೈಲು ಕಸಿದು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಧರಣಿ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ಭೇಟಿ ನೀಡಿದ್ದರು.
KUWJ ಖಂಡನೆ:
ತೀರ್ಥಹಳ್ಳಿ ತಾಲ್ಲೂಕಿನ ಪ್ರಜಾವಾಣಿ ವರದಿಗಾರ ನಿರಂಜನ್ ಕರ್ತವ್ಯಕ್ಕೆ ಅಡ್ಡಿಪಡಿಸಿ ಬೆದರಿಕೆ ಹಾಕಿರುವ ತೀರ್ಥಹಳ್ಳಿ ಇನ್ಸೆಕ್ಟರ್ ಅಶ್ವತ್ಥ ಗೌಡ ಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ.
ಪತ್ರಕರ್ತ ನಿರಂಜನ್ ಮೇಲೆ ದೈಹಿಕ ಹಲ್ಲೆಗೂ ಯತ್ನಿಸಿರುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗದ ಮೇಲೆ ನಡೆದ ದಬ್ಬಾಳಿಕೆ. ಇದನ್ನು ಜಿಲ್ಲಾ ರಕ್ಷಣಾಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷರಾದ ಕೆ.ವಿ. ಶಿವಕುಮಾರ್, ರಾಜ್ಯಸಮಿತಿ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಆಗ್ರಹಿಸಿದ್ದಾರೆ.