
- ಓದುಗರ ಸಂಖ್ಯೆ ಕ್ಷೀಣಿಸಿದರೆ ಸಾಹಿತ್ಯಕ್ಕೆ ಹಿನ್ನಡೆ | 6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶಾಸಕ ಬೇಳೂರು ಕಳವಳ
- ಹೊಸನಗರ: ಇಂದು ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಖುಷಿಯ ನಡುವೆ ಓದುಗರ ಸಂಖ್ಯೆ ಕಡಿಮೆ ಆಗುತ್ತಿರುವುದು ಸಾಹಿತ್ಯಕ್ಕೆ ಹಿನ್ನಡೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಕಳವಳ ವ್ಯಕ್ತಪಡಿಸಿದರು.
ಹೊಸನಗರದ ಕುವೆಂಪು ವಿದ್ಯಾಶಾಲೆಯ ಆವರಣದಲ್ಲಿ ನಡೆದ 6ನೇ ಶಿವಮೊಗ್ಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಶ್ರೀಗಳಿಂದ ಗೌರವ ಸ್ವೀಕರಿಸಿ, ಸಮ್ಮೇಳನಗಳು ಓದಿನ ಅಭಿರುಚಿ ಹುಟ್ಟಿಸುವ ವೇದಿಕೆಯಾಗಬೇಕು ಎಂದರು.
ಸಮ್ಮೇಳನದಲ್ಲಿ ಜನರ ಹರಿವು ಇದ್ದಾಗ ಮಾತ್ರ ಯಶಸ್ವಿಯಾಗುತ್ತವೆ. ಅಲ್ಲದೇ ಸಮ್ಮೇಳನ ಸಂದೇಶ ಆ ಮೂಲಕ ಜನರನ್ನು ತಲುಪಬೇಕು ಎಂದರು.
- ಬಿದನೂರು ನನಗೆ ಹೆಸರು ಕೊಟ್ಟ ಊರು: ಸಮ್ಮೇಳನಾಧ್ಯಕ್ಷ ಅಂಬ್ರಯ್ಯ ಮಠ
ಸಮ್ಮೇಳನಾಧ್ಯಕ್ಷ ಅಂಬ್ರಯ್ಯಮಠ, ಶಿಸ್ತಿನ ಶಿವಪ್ಪನಾಯಕ ಆಳಿದ ಬಿದನೂರು ನಗರದ ಗತಕಾಲದ ಇತಿಹಾಸ ವೈಭವ ಸಮೃದ್ಧವಾಗಿದ್ದು ನೂರಾರು ಸಂಶೋದನಾ ಗ್ರಂಥಗಳಿಗೆ ಆಕಾರವಾಗಬಲ್ಲ ಮಹತ್ವವನ್ನು ಹೊಂದಿದೆ. ಇಲ್ಲಿನ ಇತಿಹಾಸದ ಪರಿಣಾಮಕಾರಿಯಾದ ಸಂಶೋದನೆ ನಡೆಯಬೇಕಾಗಿರುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಿಸಿದರು.
ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸಾಮರಸ್ಯ ಮೇಳೈಸುವಂತೆ ಮಾಡುವುದೇ ಸಾಹಿತ್ಯದ ಉದ್ದೇಶವಾಗಿರಬೇಕು. ಅಂತಹ ಸಮಾಜ ಕ್ರಿಯಾಶೀಲವಾಗಿರುತ್ತದೆ ಎಂದರು.
-
ಲಿಂಗ ಸಮಾನತೆ, ಸರ್ವ ಸಮಾನತೆ ಮೇಳೈಸಬೇಕು: ಮಾತಾ.ಬಿ.ಮಂಜಮ್ಮ ಜೋಗತಿ:
ಸಮ್ಮೇಳನ ಉದ್ಘಾಟಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ.ಬಿ.ಮಂಜಮ್ಮ ಜೋಗತಿ, 12 ಶತಮಾನದ ಸಮಾನತೆಯ ಹರಿಕಾರ ಬಸವಣ್ಣನವರ ಆಶಯಗಳು ಇಂದು ಹೆಚ್ಚು ಪ್ರಸ್ತುತ ವಾಗಿವೆ. ಲಿಂಗ ಸಮಾನತೆ ಮತ್ತು ಸರ್ವಸಮಾನತೆ ಇಂದಿನ ತುರ್ತು ಅಗತ್ಯವಾಗಿದೆ. 10 ನೇ ತರಗತಿವರೆಗೆ ಮಕ್ಕಳಿಗೆ ಕನ್ನಡ ಕಲಿಸಿ, ನಂತರ ಎಲ್ಕಾ ಭಾಷೆಯನ್ನು ಕಲಿಸಿ ಎಂದರು.ತೃತೀಯ ಲಿಂಗಿಯಾಗಿ ಇಂದು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಸಮ್ಮೇಳನ ಉದ್ಘಾಟನೆಯ ಅವಕಾಶ ನೀಡಿರುವುದು ಬದುಕಿನ ಅವಿಸ್ಮರಣೀಯ ದಿನ ಎಂದು ಭಾವುಕರಾಗಿ ನುಡಿದರು.
-
ಶರಣ ಸಾಹಿತ್ಯ ಸಮ್ಮೇಳನ ಒಂದೇ ಜಾತಿಗೆ ಸೀಮಿತವಾಗಕೂಡದು: ಸೊನಲೆ ಶ್ರೀನಿವಾಸ್
ಶರಣ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸೊನಲೆ ಶ್ರೀನಿವಾಸ್, ಶರಣ ಸಾಹಿತ್ಯ ಸಮ್ಮೇಳನಗಳು ಕೇವಲ ಒಂದೇ ಜಾತಿ ವ್ಯವಸ್ಥೆಗೆ ಸೀಮಿತಿವಾಗದೇ ಎಲ್ಲರನ್ನು ಒಳಗೊಂಡಂತೆ ಸಮಾವೇಶಗೊಂಡರೆ ಮಾತ್ರ ಸಮ್ಮೇಳನಕ್ಕೆ ನಿಜ ಅರ್ಥ ಬರುತ್ತದೆ. ಶರಣ ಸಾಹಿತ್ಯ ಸಮ್ಮೇಳನಗಳು ಎಲ್ಲಾ ವರ‍್ಗದ ಜನರ ಸಮ್ಮೇಳನವಾಗಿ ನಡೆಯುತ್ತಿಲ್ಲ. ಒಂದು ಜಾತಿಗೆ ಸೀಮಿತವಾಗಿದೆಯೆ ಎಂಬ ಪ್ರಶ್ನೆ ಎದುರಾಗಿದೆ. ಇಂದಿನ ಸಮಾಜದಲ್ಲಿ ಜಾತಿಯ ವಿಷ ಬೀಜ ಮೇಳೈಸುತ್ತಿದೆ. ಜಾತಿ ಜಾತಿಗಳ ನಡುವೆ ಹೋರಾಟ ನಡೆಯುತ್ತಿದೆ. ಶೋಷಣೆ ನಿರಂತರವಾಗಿದೆ. ಸಮಾಜ ವ್ಯವಸ್ಥೆಯಲ್ಲಿ ವೈದಿಕರು ಪ್ರಥಮ ಸ್ಥಾನದಲ್ಲಿದ್ದರೆ ಲಿಂಗಾಯಿತರು ದ್ವಿತೀಯ ಸ್ಥಾನದಲ್ಲಿದ್ದು ಶೂದ್ರರಾದ ನಾವೆಲ್ಲ ಒಂದಾಗಿದ್ದೇವೆ ಎಂದು ವಿಷಾದಿಸಿದರು.
ಜಾತಿ ಮೇಲಿನ ಸಮ್ಮೇಳನಗಳು ಇಂದಿನ ಅವಶ್ಯವಲ್ಲ. ಬದಲಿಗೆ ಮನುಜ ಧರ್ಮ ಕಾಯಕ ಪ್ರೀತಿಯ ನಿಜವಾದ ಸಮ್ಮೇಳನಗಳು ನಡೆಯಬೇಕಿದೆ ಎಂದು ಅಭಿಪ್ರಾಯಿಸಿದರು.
ಇತಿಹಾಸ ಅರಿಯಬೇಕು.. ಬೆಕ್ಕಿನಕಲ್ಮಠ ಶ್ರೀ:
ಸಾನ್ನಿಧ್ಯವಹಿಸಿದ್ದ, ಆನಂದಪುರ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಇಂದಿಗೂ ಪ್ರಸ್ತುತ ಎನಿಸುವ ಅದೆಷ್ಟೋ ಘಟನೆಗಳು ಇತಿಹಾಸದಲ್ಲಿ ಗತಿಸಿ ಹೋಗಿದೆ. 12 ಶತಮಾನದ ಬಸವಣ್ಣನವರ ವಿಚಾರಧಾರೆಗಳು ಅಂದಿಗಿಂತ ಇಂದು ಹೆಚ್ಚು ಸೂಕ್ತವಾಗಿದೆ. ಹಾಗಾಗಿ ಇತಿಹಾಸವನ್ನು ನಾವೆಲ್ಲ ಅರಿತು ಸಾಗಬೇಕಿದೆ ಎಂದರು.
ಅಂಬ್ರಯ್ಯಮಠ ಮಠರನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಮೌಲ್ಯಪೂರ್ಣ. ಇತಿಹಾಸ ಅಧ್ಯಯನ, ಇತಿಹಾಸ ಮಹಾಪುರುಷರ ಕೃತಿ ರಚನೆ ಮೂಲಕ ತನ್ನದೇ ಕೊಡುಗೆ ಸಲ್ಲಿಸಿದ್ದಾರೆ. ಆನಂದಪುರ ಮಠದಲ್ಲಿರುವ ಇತಿಹಾಸ ಪಳೆಯುಳಿಕೆ ಸಂಗ್ರಹದಲ್ಲಿ ಇವರ ಪಾತ್ರ ಮಹತ್ತರವಾಗಿದೆ ಎಂದರು.
ಸಮ್ಮೇಳನದ ಗಾತ್ರ ಚಿಕ್ಕದಾದರು ವಿಚಾರ ದೊಡ್ಡದಾಗಿರಬೇಕು. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಕೆಳದಿ ಶಿವಪ್ಪನಾಯಕ ಜ್ಯೋತಿ ಮೆರವಣಿಗೆ:
ಸಮ್ಮೇಳನಾಧ್ಯಕ್ಷ ಅಂಬ್ರಯ್ಯಮಠ ಜೊತೆ ಕೆಳದಿ ಶಿವಪ್ಪನಾಯಕ ಜ್ಯೋತಿ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು. ವರ್ತಕ ಶ್ರೀನಿವಾಸ ಕಾಮತ್ ಮೆರವಣಿಗೆಗೆ ಚಾಲನೆ ನೀಡಿದರು. ಎನ್.ಆರ್.ದೇವಾನಂದ್ ವಚನಕಟ್ಟುಗಳಿಗೆ ಪುಷ್ಪಾರ್ಚನೆ ನೆರವೇರಿಸಿದರು. ಎಚ್.ಎನ್.ಶ್ರೀಪತಿರಾವ್ ಬಸವಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಸಮ್ಮೇಳನದ ಆವರಣದಲ್ಲಿ ರಾಷ್ಟ್ರಧ್ವಜ, ನಾಡಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣ ನೆರವೇರಿಸಲಾಯಿತು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಹೆಚ್.ಎನ್.ಮಹಾರುದ್ರ ಆಶಯ ಭಾಷಣ ಮಾಡಿದರು. ಸಮ್ಮೇಳನದ ಕಾರ್ಯಾಧ್ಯಕ್ಷ ಬಿ.ಜಿ.ಚಂದ್ರಮೌಳಿ ಪ್ರಾಸ್ತಾವಿಕ ಮಾತನಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಆನಂದಪುರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.
ತಾಲೂಕು ಘಟಕದ ಅಧ್ಯಕ್ಷ ಡಿ.ವಿ.ರೇವಣಪ್ಪಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್, ಹೊಸಕೋಟೆ ಹಾಲಪ್ಪಗೌಡ್ರು, ದೇವೇಂದ್ರಪ್ಪಗೌಡ, ಘಟಕದ ಕಾರ್ಯದರ್ಶಿ ಹ.ರು.ಗಂಗಾಧರಯ್ಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.