ಹೊಸನಗರ: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ | ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಬಾಲಕಿ | ಬಾಲಕಿ ತಂದೆಯಿಂದ ದೂರು ದಾಖಲು | 2020 ರ ಸಾಲಿನಲ್ಲಿ ರಿಪ್ಪನಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ | 23 ವರ್ಷದ ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ದೌರ್ಜನ್ಯದಿಂದ ಮನನೊಂದು ಅಪ್ರಾಪ್ತೆ ನೇಣುಹಾಕಿಕೊಂಡು ಮೃತಪಟ್ಟ ಪ್ರಕರಣದಲ್ಲಿ ಆರೋಪಿತನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ, ರೂ.1,25 ಲಕ್ಷ ದಂಡ ವಿಧಿಸಿ FTSC -1 ನ್ಯಾಯಾಲಯ ತೀರ್ಪು ನೀಡಿದೆ. ಅಲ್ಲದೇ ಮೃತ ಬಾಲಕಿ‌ ಕುಟುಂಬಕ್ಕೆ ರೂ.17 ಲಕ್ಷ ಪರಿಹಾರ ನೀಡಲು ಸರ್ಕಾರಕ್ಕೆ ಆದೇಶ ನೀಡಿದೆ.

2020ನೇ ಸಾಲಿನಲ್ಲಿ ತೀರ್ಥಹಳ್ಳಿ ತಾಲ್ಲೂಕಿನ 23 ವರ್ಷದ ಯುವಕನೊಬ್ಬನು 16 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದು, ಇದರಿಂದ ಮನನೊಂದ ಬಾಲಕಿಯು ನೇಣು ಹಾಕಿ ಕೊಂಡು ಮೃತಪಟ್ಟಿರುತ್ತಾಳೆಂದು ಮೃತ ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿತ್ತು.

ಸದರಿ ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿ ಗಿರೀಶ್ ಬಿ.ಸಿ, ಪೊಲೀಸ್ ವೃತ್ತ ನಿರೀಕ್ಷಕರು, ಹೊಸನಗರ ವೃತ್ತ ರವರು ಆರೋಪಿತನ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದು, ಸರ್ಕಾರದ ಪರವಾಗಿ  ಹರಿಪ್ರಸಾದ್ ಮತ್ತು ಶ್ರೀಮತಿ ಮಮತ ಸರ್ಕಾರಿ ಅಭಿಯೋಜಕರು ಪ್ರಕರಣದ ವಾದ ಮಂಡಿಸಿದ್ದು FTSC-1 ನ್ಯಾಯಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗಿತ್ತು.

ಆರೋಪಿಯ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ  ನ್ಯಾಯಾಧೀಶರಾದ ಶ್ರೀಮತಿ ಲತಾ ದಿನಾಂಕಃ 04-11-2023 ರಂದು ಆರೋಪಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 1,25,000/- ರೂ ದಂಡ, ದಂಡ ಕಟ್ಟಲು ವಿಫಲನಾದಲ್ಲಿ ಹೆಚ್ಚುವರಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಹಾಗೂ ಮೃತ ಬಾಲಕಿಯ ಕುಟುಂಬಸ್ಥರಿಗೆ ಪರಿಹಾರವಾಗಿ ಸರ್ಕಾರದಿಂದ 17,00,000/- ನೀಡಲು ಆದೇಶಿಸಿದ್ದಾರೆ.

Exit mobile version