ಮಹಿಳೆ ಈ ದೇಶದ ಶಕ್ತಿ : ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮ ಸುಬ್ರಹ್ಮಣ್ಯ | ಕರಿಮನೆಯಲ್ಲಿ ಸುಮಾ ಸುಬ್ರಹ್ಮಣ್ಯ, ಕಾವ್ಯಾ ಹೆಚ್.ಎಲ್.ಗೆ ಪಂಚಾಯ್ತಿ ಗೌರವ

ಮಹಿಳೆ ಈ ದೇಶದ ಶಕ್ತಿ : ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮ ಸುಬ್ರಹ್ಮಣ್ಯ | ಕರಿಮನೆಯಲ್ಲಿ ಸುಮಾ ಸುಬ್ರಹ್ಮಣ್ಯ, ಕಾವ್ಯಾ ಹೆಚ್.ಎಲ್.ಗೆ ಪಂಚಾಯ್ತಿ ಗೌರವ

ಹೊಸನಗರ: ಬದುಕಿನ ಎಲ್ಲಾ ಆಯಾಮಗಳಲ್ಲಿ ಪ್ರಭಾವಿತಳಾಗಿರುವ ಮಹಿಳೆ ಈ ದೇಶದ ಶಕ್ತಿ ಎಂದು ಹೊಸನಗರ ತಾಲೂಕು ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮ ಸುಬ್ರಹ್ಮಣ್ಯ ಹೇಳಿದರು.

ತಾಲೂಕಿನ ಕರಿಮನೆ ಗ್ರಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಪೋಷಣ್ ಮಾಸಾಚರಣೆ ಉದ್ಘಾಟಿಸಿ ಮತ್ತು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಮಹಿಳೆ ಕುಟುಂಬ ಮತ್ತು ಸ್ವಾಸ್ಥ್ಯವನ್ನು ಗಮನದಲ್ಲಿರಿಸಿ ಸೇವೆ ಮಾಡುತ್ತಾಳೆ. ಯಾವುದೇ ಕುಟುಂಬ, ಸಂಘ, ಸಂಘಟನೆ ಆರ್ಥಿಕವಾಗಿ ಸ್ವಾವಲಂಬಿ ಆಗಬೇಕಾದರು ಕೂಡ ಮಹಿಳೆಯ ಪಾತ್ರ ಗಮನಾರ್ಹ ಎಂದರು.
ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆಯಾಗಿ ಮಹಿಳೆಯರಿಗೆ ಪೂರಕವಾಗಿ ಹಲವು ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಅಲ್ಲದೇ ನನ್ನೂರಲ್ಲಿ ಸಿಕ್ಕ ಸನ್ಮಾನಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎರಡು ಬಾರಿ ತಾಪಂ ಸದಸ್ಯೆಯಾಗಿ, ಎರಡು ಬಾರಿ ತಾಪಂ ಅಧ್ಯಕ್ಷೆಯಾಗಿ ಮತ್ತು ಮಹಿಳಾ ಒಕ್ಕೂಟದ ಪ್ರತಿನಿಧಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದೀಗ 30 ಗ್ರಾಪಂ ಒಳಗೊಂಡಿರುವ ಮಲೆನಾಡು ಸಂಜೀವಿನಿ ಒಕ್ಕೂಟದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಾರೆ. ನಾನು ಚುನಾವಣೆಗೆ ಸ್ಪರ್ಧಿಸುವಾಗ ಮಾತ್ರ ಪಕ್ಷ, ರಾಜಕೀಯ ಮಾಡಿದ್ದೇನೆ ಆದರೆ ನಂತರ ರಾಜಕೀಯ, ಪಕ್ಷಬೇಧ ಮಾಡಿಲ್ಲ. ಈ ಸನ್ಮಾನ ಇನ್ನಷ್ಟು ಜವಾಬ್ದಾರಿ ನೀಡಿದೆ ಎಂದರು.

ತಾಲೂಕು ಮಲೆನಾಡು ಸಂಜೀವಿನಿ ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸುಮ ಸುಬ್ರಹ್ಮಣ್ಯರನ್ನು ಗ್ರಾಪಂ, ಕರವಿ ಸಂಜೀವಿನಿ ಒಕ್ಕೂಟ, ಅಂಗನವಾಡಿ, ಸಾರ್ವಜನಿಕರಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯರಿಂದ ಪುರಸ್ಕೃತರಾದ ಕಲ್ಪಿತ ನ್ಯಾಯಾಲಯದ ಉತ್ತಮ ನ್ಯಾಯಧೀಶೆ ಮಳಲಿ ಕಾವ್ಯ ಹೆಚ್.ಎಲ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅಪೂರ್ವ ಕ್ಷಣ: ಕಾವ್ಯಾ ಹೆಚ್.ಎಲ್

ಸನ್ಮಾನಿತೆ ಕಾವ್ಯಾ ಹೆಚ್.ಎಲ್ ಮಾತನಾಡಿ, ಹೈಕೋರ್ಟ್, ಜಿಲ್ಲಾ ಜಡ್ಜ್ ಉಪಸ್ಥಿತಿಯಲ್ಲಿ ನಾನು ಭಾಗವಹಿಸಿದ್ದೇ ದೊಡ್ಡ ಸಾಧನೆ. ಅದರಲ್ಲು ಸ್ವತಃ ವಕೀಲರು ಕೂಡ ಆಗಿರುವ ಸಿಎಂ ಸಿದ್ದರಾಮಯ್ಯರವರು ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅಪೂರ್ವ ಕ್ಷಣ ಎಂದರು. ಇದಕ್ಕೆ ನನ್ನ ಕುಟುಂಬದವರ ಸಹಕಾರ ಮುಖ್ಯ ಕಾರಣ. ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ, ಮಕ್ಕಳು, ತಾಯಿಯ ಆರೋಗ್ಯ, ಎದೆ ಹಾಲಿನ ಮಹತ್ವ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಗತ್ಯ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮಕ್ಕಳ ತಾಯಂದಿರು, ಗ್ರಾಮಸ್ಥರು ವಿಶೇಷವಾಗಿ ಪೌಷ್ಟಿಕಾಂಶ ಆಹಾರವನ್ನು ತಯಾರಿಸಿ ತಂದು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ಕರಿಮನೆ ಗ್ರಾಪಂ ಅಧ್ಯಕ್ಷೆ ದೇವಮ್ಮ ಗೋಪಾಲ್, ಉಪಾಧ್ಯಕ್ಷ ರಮೇಶ ಹಲಸಿನಹಳ್ಳಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ಅಂಗನವಾಡಿ ಮೇಲ್ವಿಚಾರಕಿ ಸುಜಾತ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕರಿಬಸಮ್ಮ, ಗ್ರಾಪಂ ಸದಸ್ಯರಾದ ದೇವೇಂದ್ರ ನಾಯ್ಕ, ಪ್ರಕಾಶ ಮಳಲಿ, ಸಿಆರ್ಪಿ ರೇಖಾ ಪ್ರಭಾಕರ್, ಎಎಸ್ಐ ಕುಮಾರ್, ಗ್ರಾಮ ಸಹಾಯಕ ಉಮೇಶ ಗಾಣದಗದ್ದೆ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಲ್ಮಾ ಡಿಸೋಜ ಪ್ರಾರ್ಥಿಸಿದರು. ಗೀತಾ ಸ್ವಾಗತಿಸಿದರು. ಗಾಯತ್ರಿ ಜಯಶ್ರೀ ವಂದಿಸಿದರು. ನಾಗರತ್ನ ನಿರೂಪಿಸಿದರು.

Exit mobile version