
SHIMOGA-UDUPI| ಕುಸಿತದ ಭೀತಿಯಲ್ಲಿ ಪ್ರಮುಖ ಹೆದ್ದಾರಿ ಮಾರ್ಗ | ಧರೆ ಕುಸಿತ ಮುಂದುರೆದರೇ ಸಂಪರ್ಕಕ್ಕೆ ಬಹುದೊಡ್ಡ ಕುತ್ತು?
ಶಿವಮೊಗ್ಗ/ಹೊಸನಗರ: ಎರಡು ವರ್ಷದ ಹಿಂದೆ ಕುಸಿದಿದ್ದ ಹೆದ್ದಾರಿ ಮಾರ್ಗ ಮತ್ತೆ ಕುಸಿತಕ್ಕೆ ಒಳಗಾಗಿದೆ. ಈ ಮಾರ್ಗ ಕುಸಿದರೇ ಸಂಪರ್ಕಕ್ಕೆ ಬಾರೀ ಕುತ್ತು ತರಲಿದೆ. ಅಧಿಕಾರಿಗಳ ತುರ್ತು ಗಮನ ಹರಿಸಲೇ ಬೇಕಿದೆ.
ಹೌದು ಇದು ಶಿವಮೊಗ್ಗ ಜಿಲ್ಲೆಯಿಂದ ತೀರ್ಥಹಳ್ಳಿ ಮತ್ತು ಹೊಸನಗರ ಮಾರ್ಗವಾಗಿ ಉಡುಪಿಜಿಲ್ಲೆಗೆ ತೆರಳುವಾಗ ಮಾಸ್ತಿಕಟ್ಟೆ ಸಂಪರ್ಕಿಸುವುದು ಅನಿವಾರ್ಯ. ಮಾಸ್ತಿಕಟ್ಟೆ ಮೂಲಕ ಹುಲಿಕಲ್ ಮಾರ್ಗವಾಗಿ ಉಡುಪಿ, ಮಂಗಳೂರು, ಕುಂದಾಪುರ ಸಂಪರ್ಕ ಮಾಡಬೇಕಿದೆ.
ಆದರೆ ಮಾಸ್ತಿಕಟ್ಟೆ ಯಿಂದ ಹುಲಿಕಲ್ ಮಾರ್ಗದ ಸ್ವಲ್ಪ ದೂರದ ತಿರುವಿನಲ್ಲಿ ವ್ಯಾಪಕ ಮಳೆಗೆ ಧರೆ ಕುಸಿತ ಕಾಣುತ್ತಿದೆ. ಹೆದ್ದಾರಿಯ ಡಾಂಬರೀಕರಣಕ್ಕೆ ಹೆಚ್ಚೆಂದರೆ ಎರಡು ಮೂರು ಅಡಿ ಇರಬಹುದು. ಇನ್ನೊಂದು ಸ್ವಲ್ಪ ಮುಂದುವರೆದರೂ ಸಂಚಾರಕ್ಕೆ ಸಂಚಕಾರ ಉಂಟಾಗುವ ಸಾಧ್ಯತೆ ಇದೆ.
ಮೂರು ವರ್ಷದಿಂದ ಕುಸಿತ:
ಈಭಾಗದಲ್ಲಿ ಮೂರು ವರ್ಷದ ಹಿಂದಿನಿಂದಲೂ ಕುಸಿತ ಕಂಡು ಬರುತ್ತಿದೆ. ಇದು ಗಮನಕ್ಕೆ ಬರುತ್ತಿದ್ದಂತೆ ಹೆದ್ದಾರಿ ಅಧಿಕಾರಿಗಳು ಧಾವಿಸಿ ಮರಳು ಚೀಲಗಳನ್ನಿಟ್ಟು ತಡೆಗೋಡೆ ನಿರ್ಮಿಸಿದ್ದರು. ಈಬಾರಿ ಮರಳು ಚೀಲಗಳ ಜೊತೆಯಲ್ಲೇ ಧರೆ ಕುಸಿದಿದೆ. ಸುಮಾರು 40 ಅಡಿ ಆಳವಿದ್ದು ಪ್ರಪಾತದಂತೆ ಕಂಡು ಬರುತ್ತಿದೆ. ಕುಸಿತ ಪರಿಶೀಲಿಸಿದರೆ ಭಯ ತರಿಸುವಂತಿದೆ.
ಶಿವಮೊಗ್ಗ, ದಾವಣಗೆರೆ, ಹೊಸಪೇಟೆ, ಬಳ್ಳಾರಿ, ಉಡುಪಿ, ಕುಂದಾಪುರ, ಮಂಗಳೂರು, ಹೀಗೆ ಬಹುತೇಕ ಜಿಲ್ಲೆಗಳ ಅಗತ್ಯವಸ್ತುಗಳ ಸರಬರಾಜಿಗೆ ಬಹುದೊಡ್ಡ ಸಂಪರ್ಕ ಇದಾಗಿದ್ದು ತುರ್ತಾಗಿ ಗಮನಹರಿಸಬೇಕಿದೆ.